ನಾಗಮಲ್ಲಿಗೆ
ಅಕ್ಯಾಂತೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ರೈನಕಾಂತಸ್ ಕಮ್ಯೂನಿಸ್ ಇದರ ಶಾಸ್ತ್ರೀಯ ಹೆಸರು. ಭಾರತ ಮತ್ತು ಮಲಯ ಇದರ ಮೂಲಸ್ಥಾನ ಎನ್ನಲಾಗಿದೆ. ಭಾರತ, ದಕ್ಷಿಣ ವೆನಜ್ವೇಲ, ಜಾವ, ಶ್ರೀಲಂಕಾ ಮತ್ತು ಮಡಗಾಸ್ಕರ್‍ಗಳಲ್ಲೆಲ್ಲ ಇದು ವ್ಯಾಪಿಸಿದೆ. ನಾಗಮಲ್ಲಿಗೆ 1-2 ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಸರಳ; ಸುತ್ತು ಮಾದರಿಯಲ್ಲಿ ಜೋಡಣೆಗೊಂಡಿವೆ. ಇದರಲ್ಲಿ ಜೋಡಣೆಯ ಎಲೆಯ ಬುಡದ ಭಾಗ ಸ್ವಲ್ಪ ಅಗಲವಾಗಿಯೂ ತುದಿ ಚೂಪಾಗಿಯೂ ಇದೆ. ಹೂಗಳು ಗೊರಟೆ ಹೂಗಳನ್ನು ಹೋಲುತ್ತವೆ.

    ನಾಗಮಲ್ಲಿಗೆಯನ್ನು ಕಂದು (ಸಕರ್) ಮತ್ತು ಬೀಜಗಳಿಂದ ವೃದ್ಧಿಸಬಹುದು. ಇದರ ಬೇರು ಮತ್ತು ಎಲೆಯ ರಸವನ್ನು ನಿಂಬೆರಸ, ಕರಿಮೆಣಸುಗಳ ಜೊತೆ ಸೇರಿಸಿ ಇಸಬು, ಹುಳುಕಡ್ಡಿಗಳ ನಿವಾರಣೆಗೆ ಹಚ್ಚುವುದುಂಟು. ಭಾರತದ ಕೆಲವೆಡೆಗಳಲ್ಲಿ ನಾಗಮಲ್ಲಿಗೆಯ ಬೇರನ್ನು ಹಾವು ಕಡೆತಕ್ಕೆ ಬಳಸುವ ಕ್ರಮ ಇದೆ. ಆದ್ದರಿಂದ ಇದನ್ನು ನಾಗಮುಳ್ಳಿ (ಕೋಬ್ರರೂಟ್), ನಾಗಮಲ್ಲೆ ಎಂದು ಕರೆಯುವುದುಂಟು.
(ಎಚ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ